ಪೇಸ್ ಬುಕ್ ಅವಾಂತರ.
ಶುಭಾ ಗಿರಣೀಮನೆ
ಯಲ್ಲಪುರ,ಉತ್ತರ ಕನ್ನಡ.
ನಾನು ಇನ್ನು ಒಂಟಿಯಾಗಿ ಮನೆಯಲ್ಲಿ ಇರಬೇಕು. ಗಂಡ ಮಕ್ಕಳಿಗೆ ತಿಂಡಿ ತಿನ್ನಿಸಿ ತಯಾರಿ ಮಾಡಿ ಮನೆಯಿಂದ ಕಳಿಸಿ, ಬಾಗಿಲನ್ನು ಭದ್ರವಾಗಿ ಹಾಕಿದ್ದಾಯಿತು. ಆದರೆ ಇಂದು ಒಂದು ಕಡೆ ಮನಸ್ಸು ನೆಲೆ ನಿಲ್ಲುತ್ತಲೇ ಇಲ್ಲ. ಯಾವ ಕೆಲಸ ಮಾಡಬೇಕು, ಛೇ ಗೊತ್ತಾಗುತ್ತಲೇ ಇಲ್ಲ. ಒಂತರ ಎಲ್ಲವೂ ಗೊಂದಲ.
ಹೌದು ಅವನು ಬಂದು ಬಿಟ್ಟರೆ? ಅಯ್ಯೋ ದೇವರೆ, ಹಾಗೇನಾದರೂ ಬಂದರೆ ನಾನು ಏನು ಹೇಳಬೇಕು? ಸುತ್ತ ಜನ ಏನೇಂದುಕೊಂಡಾರು? ಛೀ ನಾನು ಮಾತನಾಡಲೇ ಬಾರದಿತ್ತು. ಹೌದು ಅವನು ಹೇಗೆ ಬರುತ್ತಾನೆ. ನಾನು ವಿಳಾಸವನ್ನು ಕೊಟ್ಟಿಲ್ಲವಲ್ಲ. ಆದರೂ ಅದು ಹೇಗೆ ನನ್ನ ಮನೆಯ ವಿಳಾಸ ಹೇಳಿದ. ಕೆಲವು ದಿನದ ಪರಿಚಯ.
ನಾನು ಈ ಪೇಸ್ ಬುಕ್ ಉಪಯೋಗಿಸಬಾರದಿತ್ತು. ಮನೆಗೆ ಕಂಪ್ಯೂಟರ್ ತಗೊಂಡು ಬನ್ನಿ ಎಂದಿದ್ದೆ ತಪ್ಪಾಯಿತು. ಮಕ್ಕಳು ಕಲಿಯುತ್ತಾವೆ. ಈಗಿನ ಕಾಲದಲ್ಲಿ ಎಲ್ಲರ ಮನೆಯಲ್ಲೂ ಕಂಪ್ಯೂಟರ್ ಇರೊದು ಸಹಜ. ಹಾಗೆ ನನ್ನ ಮನೆಯಲ್ಲಿ ಇರಲಿ ಎಂದು ಬಯಸಿದ್ದು ತಪ್ಪಾ. ನಂಗೆ ಈ ಕಂಪ್ಯೂಟರ್ ಬಗ್ಗೆ ಗೊತ್ತೆ ಇರಲಿಲ್ಲ. ಇವರು ಒತ್ತಾಯ ಮಾಡಿ ಕಂಪ್ಯೂಟರ್ ಕಲಿ ಎಂದರು. ನನಗೂ ಹೊಸ ಉಮೇದು. ಕಲಿತೆ, ಇಂಟರ್ ನೆಟ್ ಹಾಕಿಸಿಕೊಂಡೆ, ಹೊಸ ಹೊಸ ವಿಚಾರಗಳು, ವಿಶೇಷತೆಗಳು ತಿಳಿಯುತ್ತಾ ಹೋದವು.
ಪೇಸ್ ಬುಕ್ ಅಕೊಂಟ್ ಅವಿನಾಶ್ ತೆಗೆದುಕೊಟ್ಟಿದ್ದು. ಅಬ್ಬಾ ಎಷ್ಟೋಂದು ಖುಶಿ. ಎಷ್ಟೆಲ್ಲ ಸ್ನೇಹಿತರು. ಎಲ್ಲರು ಎಷ್ಟು ಚೆನ್ನಾಗಿ ಮಾತನಾಡುತ್ತಾರೆ. ಆದರೆ ಅವಿನಾಶ್ ಹೇಳಿದಂಗೆ ಯಾರಿಗೂ ನನ್ನ ಪೋನ್ ನಂಬರ್ ಮಾತ್ರ ಕೊಟ್ಟಿರಲಿಲ್ಲ. ಆತನೊಬ್ಬ ಅದೇನೆನೋ ಕೆಟ್ಟದಾಗಿ ಮಾತನಾಡಿಸಿದ್ದ. ನಾನು ಅವಿನಾಶ್ ಗೆ ಕೇಳಿದ್ದೆ ಏನು ಮಾಡಲಿ ಅಂತ. ಆಗ ಅವಿನಾಶ್ ನಂಗೆ ಬ್ಲಾಕ್ ಮಾಡುವುದನ್ನು ಹೇಳಿಕೊಟ್ಟಿದ್ದರು. ಅಲ್ಲಿಂದ ಒಂದೊಂದೆ ಅನುಭವವಾಗಿ, ಯಾರಿಗೂ ನನ್ನ ಯಾವ ವಿವರಣೆಯನ್ನು ನೀಡಿರಲಿಲ್ಲ.
ಆದರೆ ಇತನಿಗೆ ಹೇಗೆ ತಿಳಿಯಿತು. ನನ್ನ ಊರು, ಮಕ್ಕಳು, ಗಂಡ, ಪೋನ್ ನಂಬರ್ ಎಲ್ಲವೂ. ಪೇಸ್ ಬುಕ್ಕಲ್ಲಿ ಏಷ್ಟು ಸಲ ಕೇಳಿದ್ದ ನನ್ನ ಪೋನ್ ನಂಬರ್. ನಾನು ಕೊಟ್ಟಿರಲಿಲ್ಲ. ಹಾಗಂತ ಕೆಟ್ಟದಾಗಿ ಮಾತನಾಡಿರಲಿಲ್ಲ. ಪೋಟೊ ಕೊಡು ಅಂತಿದ್ದ. ಅವನು ಮತ್ತೆ ಮತ್ತೆ ಕೇಳಿದಾಗ ಬೇಸರವಾಗಿ ನಾನೇ ಬ್ಲಾಕ್ ಮಾಡಿದ್ದೆ. ಕೆಲವು ದಿನದ ಪರಿಚಯದಲ್ಲಿ ಅವನೇಕೆ ಹೀಗೆ ಕಾಡುತ್ತಿದ್ದಾನೆ. ನನ್ನ ನೋಡಿಲ್ಲ. ನನ್ನ ದ್ವನಿಯನ್ನು ಕೇಳಿರಲಿಲ್ಲ. ಎರಡು ಮಕ್ಕಳ ತಾಯಿ ಅಂತ ಗೊತ್ತು. ಆದರು ಆದರು..... ಅವನು ಏನಂದ. ಹಾ ನನ್ನ ಪ್ರೀತಿ ಮಾಡುತ್ತಿಯಾ ಅಂತ. ಅಬ್ಬ ಏಷ್ಟು ಧೈಯ೯. ಮದುವೆ ಆದವಳ ಬಳಿ ಕೇಳುವ ಮಾತಾ ಅದು.
ಮೊನ್ನೆ ಮಧ್ಯಾಹ್ನ ಊಟ ಮಾಡಿ ಒಂದು ಸ್ವಲ್ಪ ಹೊತ್ತು ಮಲಗೋಣ ಅಂತ ರೂ೦ ಹೊರಟಾಗ, ಆ ಪೋನ್ ರಿಂಗಣಿಸಿತ್ತು. ಎಂದಿನಂತೆ ಹೋಗಿ ರಿಸಿವರ್ ಎತ್ತಿದ್ದೆ.
"ಚೆನ್ನಗಿದ್ದಿರಾ ಚಿನ್ನು?" ಎನ್ನುವ ಅಪರಿಚಿತ ದ್ವನಿ. " ಯಾರು ?" ಎಂದಾಗ, ಆ ಕಡೆ ಮಧುರವಾದ ನಗು. ನನಗೂ ನಗು ಬಂದಿತ್ತಾದರೂ ತೋರಿಸದೆ " ನೀವು ಯಾರು ಅಂತ ಮತ್ತೆ ಕೇಳಿದ್ದೆ.
" ನಾನು ಚಿನ್ನು ರಂಗನಾಥ. ನಿನ್ನ ಪೇಸ್ ಬುಕ್ಕ್ ನ ಗೆಳೆಯ." ಎಂದಾಗ ನಂಗೆ ಅದಾವುದೋ ಭಯವಾಗಿತ್ತು. ಹೌದು ಅವನು ಹೇಳಿದ್ದ. ನಾನು ನಿನ್ನ ಮನೆ ವಿಳಾಸ ಮತ್ತು ಪೋನ್ ನಂಬರನ್ನು ಹುಡುಕ್ತಿನಿ ಅಂತ. ಹೇಗೆ ಅ೦ತ ಕೇಳಿದಾಗ, ಒಂದು ವಾರ ಟೈಮ್ ಕೊಡು ಹುಡುಕ್ತಿನಿ ಅಂದಿದ್ದ. ಅದೇ ದಿನ ಇವನ ಸಹವಾಸ ಬೇಡ ಅಂತ ಬ್ಲಾಕ್ ಮಾಡಿದ್ದೆ.
ಆದರೆ ಮೊನ್ನೆ ಪೋನ್ ನಲ್ಲಿ " ನಿನ್ನ ಗಂಡನಿಗೆ ಹೇಳ್ತಿನಿ, ನಾನು ನಿಮ್ಮವಳನ್ನ ತುಂಬಾ ಪ್ರೀತಿಸ್ತಿನಿ ಅಂತ. ಅವರನ್ನ ನಾನು ಕೇಳುವ ರೀತಿಲಿ ಕೇಳಿದ್ರೆ ಬಿಟ್ಟು ಕೊಡುತ್ತಾರೆ." ಎಂದ ಆ ರಂಗನಾಥ. ನಾನ್ಯಾಕೆ ಆಗ ಅವನಿಗೆ ಬರಬೇಡ ನನ್ನ ಮನೆಗೆ ಅನ್ನಲಿಲ್ಲ. ಇಲ್ಲ ಇಂದು ಬರುತ್ತಾನೆ ಏನು ಮಾಡಲಿ? ಹನ್ನೊಂದು ಗಂಟೆಗೆ ಬರುತ್ತೇನೆ ಅಂದಿದ್ದಾನೆ. ಈಗ ಗಂಟೆ ಎಷ್ಟು?. ಹನ್ನೆರಡು ಗಂಟೆ. ಇನ್ನೂ ಬಂದಿಲ್ಲ. ಏನಾದರಾಗಲಿ ನಾನು ಬಾಗಿಲು ತೆರೆಯಲೇ ಬಾರದು. ಯಾವ ರಂಗನಾಥನೋ ಬಂದರೆ ಸರಿಯಾಗಿ ಬೈದು ಕಳಿಸಿ ಬಿಡುತ್ತೇನೆ.
ಯಾಕೋ ರಾತ್ರಿಯೂ ಸರಿಯಾಗಿ ನಿದ್ದೆ ಬರಲಿಲ್ಲ. ಆ ಹಾಳಾದ ರಂಗನಾಥನ ಮಾತೇ ನೆನಪಾಗುತಿತ್ತು. ಒಂದಿಷ್ಟು ಹೊತ್ತು ಹಾಗೆ ಮಲಗೋಣ. ದೇವರೆ ಇಂದು ಅವನು ಬರದಂತೆ ನೋಡಿಕೊ. ಅಲ್ಲ ಎಂದೂ ಅವನು ಬರದಂತೆ ನೋಡಿಕೊ. ಅರೆ! ಬಾಗಿಲು ಬಡಿದ ಶಬ್ದವಾಯಿತು. ಯಾರು ಬಂದರು. ಅವನು ಬಂದನೆ . ಅಯ್ಯೋ ನನ್ನ ಕೈ ಕಾಲುಗಳು ನಡುಗುತ್ತ ಇದೆ. ಬಾಗಿಲು ತೆರೆಯುವುದೇ ಬೇಡ. ಹಾಗೆ ಬಡಿದು ಸುಸ್ತಾಗಿ ಹೊರಟು ಹೋಗಲಿ. ಆದರೆ ಬೇರೆಯಾರದರು ಆಗಿದ್ದರೆ?
ಮತ್ತೆ ಮತ್ತೆ ಬಡಿಯುತ್ತಿದ್ದಾರೆ. ಒಮ್ಮೆ ಆ ಕಿಟಕಿಯಲಿ ನೋಡಿ ಬಿಡುವುದು ಸರಿ.
ಅರೇ! ನನ್ನ ಅವಿನಾಶ್ ಅಲ್ಲವೆ? ಛೇ ಕಿಟಕಿಯಿಂದ ನೋಡದಿದ್ದರೆ ಅನಾಹುತವಾಗುತಿತ್ತು. ಇನ್ನು ಭಯವಿಲ್ಲ. ನನ್ನ ಮೇಲೆ ಅವಿನಾಶ್ ಗೆ ನಂಬಿಕೆ ಇದೆ. ಸರಿಯಾಗಿ ಬೈದು ಕಳಿಸ್ತಾರೆ. ಹೋ ರಂಗಮ್ಮನ ಮಗ ಜಗನಾಥ ಜೊತೆಯಲ್ಲಿದ್ದಾನೆ. ಊಟ ಮಾಡಿಕೊಂಡು ಹೋಗುತ್ತಾರೆ. ಇಬ್ಬರು ಹಳೆಯ ಸ್ನೇಹಿತರು.
***
ಹೌದು ಊಟವಾಯಿತು. ಇವರು ಈಗ ಹೊರಟು ಹೋದರು. ಮತ್ತೆ ಒಂಟಿ. ಏನು ಮಾಡಲಿ? ಪಕ್ಕದ ಮನೆಗೆ ಹೋಗಲೇ. ಬೇಡಾ. ಮಕ್ಕಳು ನಾಲ್ಕು ಗಂಟೆಗೆ ಮನೆಗೆ ಬಂದು ಬಿಡುತ್ತವೆ. ಅವರಿಗೆ ತಿಂಡಿ, ಹೋಮ್ ವಕ್೯ ಮಾಡಿಸಬೇಕು. ಆದರೆ ಮಕ್ಕಳಿರುವಾಗ ಬಂದರೆ ಏನು ಮಾಡಲಿ? ಅಯ್ಯೋ ಇಗಲೆ ಬಂದಿದ್ದರೆ ಒಂದಿಷ್ಟು ಬೈದು ಕಳಿಸಬಹುದಿತ್ತು. ಮಕ್ಕಳೆದುರು ಪೇಸ್ ಬುಕ್ ವಿಚಾರ ಹೇಳಿದರೆ. ಮಕ್ಕಳು ಬಂದರು. ಅವನು ಬರದಿದ್ದರೆ ಸಾಕು.
ಅಬ್ಬಾ ಬರಲಿಲ್ಲ ಈಗ ರಾತ್ರಿ ಅಯಿತು. ಮಕ್ಕಳು ಮಲಗಿ ಬಿಟ್ಟವು. ಇಂದು ಯಾಕೋ ಅವಿನಾಶ್ ಕೂಡ ಮಲಗಿಬಿಟ್ಟ. ಆದರೆ ಅವನು ನಾಳೆ ಬಂದರೆ ಏನು ಮಾಡುವುದು. ಯಾಕೊ ಹೊಟ್ಟೆಯಲ್ಲಿ ಸಂಕಟ. ಪೋನ್ ರಿಂಗಾಗುತ್ತಿದೆ. ಈ ರಾತ್ರಿ ಯಾರೋ,
"ಹಲೋ.."
"ಚಿನ್ನಾ ನಾನು ರಂಗನಾಥ. ಇವತ್ತು ತುಂಬಾ ಚೆನ್ನಗಿ ಕಣಿಸ್ತಿದ್ದೆ ನೀನು." ಆ ಮಧುರವಾದ ದ್ವನಿ
" ನೀವು ಎಲ್ಲಿ ನೋಡಿದ್ರಿ ನನ್ನ?"
" ನಾನು ನಿಮ್ಮ ಮನೆಗೆ ಬಂದಿದ್ದೆನಲ್ಲ ಇಂದು."
"ಸುಳ್ಳು ಹೇಳಬೇಡಿ. ನಾನು ನನ್ನ ಗಂಡನಿಗೆ ಹೇಳಿ ಬಿಡುತ್ತೇನೆ"
ಸುಳ್ಳು ಹೇಳುತ್ತಿಲ್ಲ, ನೀನೆ ಊಟ ಬಡಿಸಿದ್ದಿಯಾ ನಂಗೆ, ನಿನ್ನ ಗಂಡನ ಬಾಲ್ಯ ಸ್ನೇಹಿತ ಜಗನ್ನಾಥ ಕಣೆ ನಾನು."
"ಅದು.. ಅದು ರಂಗನಾಥ?"
"ರಂಗಮ್ಮನ ಮಗ ಜಗನ್ನಾಥ. ಅಮ್ಮ ನನ್ನಿಂದ ದೂರವಾದ ಮೇಲೆ ಅಮ್ಮನ ಹೇಸರನ್ನ ನನ್ನ ಹೇಸರಲ್ಲಿ ಪೊಣಿಸಿದೆ. ರಂಗನಾಥ ಅಂತ"
"ಮತ್ತೆ ಯಾಕೆ ನನ್ಗೆ ಮೊದಲೇ ಹೇಳಲಿಲ್ಲ.
"ನಾನು ನಿನ್ನ ಮೊದಲು ಒಮ್ಮೆ ನೋಡಿದ್ದೆ. ಆಗ ಮದುವೆ ಅಗಿರಲಿಲ್ಲ ನಿಂಗೆ. ನಿನ್ನ ನೋಡಿದಾಗ ಮನಸಿಗೆ ಹಿಡಿಸಿತ್ತು. ಮದುವೆ ಆಗೋಣ ಅಂದುಕೊಂಡಿದ್ದೆ. ಹಾಗೆ ನಾನು ಮುಂಬಾಯಿಗೆ ಹೋಗುವ ಸಂದಭ೯ ಬಂದಿದ್ದರಿಂದ ಮನೆಯಲ್ಲಿ ನಿನ್ನ ವಿಚಾರ ತಿಳಿಸಲಿಲ್ಲ. ಆದರೆ ನಾನು ವಾಪಸ್ ಮೂರು ತಿಂಗಳಲ್ಲಿ ಬರುವ ಹೊತ್ತಿಗೆ ನಿನ್ನ ಅವಿನಾಶ್ ಮದುವೆ ಆಗಿ ಹೋಗಿತ್ತು. ಆಮೇಲೆ ನಂಗು ಮದುವೆ ಅಯಿತು. ಮಕ್ಕಳಾದರು. ಪೇಸ್ ಬುಕ್ ನಲ್ಲಿ ನಿನ್ನ ಹೆಸರು ಕಾಣಿಸಿತು. ಹಾಗೆ ಮಾತನಾಡಿಸಿದೆ. ಅಷ್ಟೆ. ಬೇಸರ ಮಾಡಿಕೊಳ್ಳಬೇಡಾ. ಈಗ ರಾತ್ರಿ ಆಯಿತು. ನಾಳೆ ಪೋನ್ ಮಾಡುತ್ತೇನೆ. ನಿನ್ನ ಲವ್ವರ್ ಆಗಿ ಅಲ್ಲ. ಒಳ್ಳೆಯ ಸ್ನೇಹಿತನಾಗಿ ಇರುತ್ತೇನೆ." ಎಂದು ಹೇಳಿದವನು ಮಾತು ನಿಲ್ಲಿಸಿಬಿಟ್ಟ.
ಅಬ್ಬಾ ಎಂತ ಹೆದರಿಕೆಯಾಗಿತ್ತು. ಅಂತು ಸಮಸ್ಯೆ ಬಗೆ ಹರಿಯಿತಲ್ಲ. ಮೂರು ದಿನದಿಂದ ನಿದ್ದೆಯಿಲ್ಲ, ಊಟ ಸರಿಯಾಗಿ ಮಾಡಿಲ್ಲ ಇವನ ಯೋಚನೆಯಲ್ಲಿ ಸುಸ್ತಾಯಿತು. ನಾಳೆ ಪೋನ್ ಮಾಡಿದಾಗ ಹೇಳಬೇಕು. ಇನ್ನು ಯಾವ ಹೆಣ್ಣಿಗೂ ಈ ರೀತಿಯಾಗಿ ತೊಂದರೆ ಕೊಡಬೇಡ ಅಂತ.
ಪಾಪ ನನ್ನ ಕಂದ ಹೊದಿಕೆ ಹೊದಿಯದೆ ಮಲಗಿದೆ. ನಾನೂ ಮಲಗಿಬಿಡುವೆ. ನನ್ನ ಪುಟ್ಟ ಕಂದನ ಜೊತೆ. ಇಂದು ನಿಶ್ಚಿಂತೆಯಾಗಿ ಮಲಗುವೆ.
Labels: ಕಥೆ

0 Comments:
Post a Comment
Subscribe to Post Comments [Atom]
<< Home