ಭಾಗವತ ಪುರಾಣ
ಗುಂಡೇನಟ್ಟಿ ಮಧುಕರ
217/18-ಎ, ಗಣೇಶ ಮಾರ್ಗ,
3ನೇ ತಿರುವು, ಹಿಂದವಾಡಿ,
ಬೆಳಗಾವಿ-590011
ನಮ್ಮ ಮನೆಯ ಎದುರುಗಿನ ಮನೆಯೇ ಭಾಗಮ್ಮನದು. ಕರಿಹಂಚಿನ ಹಳೆಯದಾದ ಮನೆ. ಮನೆಯ ಮುಂದೊಂದು ಕಲ್ಲಿನ ಕಟ್ಟೆ. ತಲೆಬಾಗಿಲು ಪ್ರವೇಶಿಸುತ್ತಿದ್ದಂತೆಯೇ ಎತ್ತರವಾದ ಬಿಳಿಶುಭ್ರವಾದ ಎರಡು ಎತ್ತುಗಳು ಹುಲ್ಲು ತಿನ್ನುತ್ತ ನಿಂತಿರುತ್ತವೆ. ಅವುಗಳ ಎಡಬದಿಗೆ ಸ್ವಲ್ಪ ಅಂತರದಲ್ಲಿ ಎರಡು ಮುದ್ದಾದ ಆಕಳುಗಳು. ಒಂದು ಪೂರ್ಣ ಕಂದು ಬಣ್ಣದ್ದಾದರೆ ಇನ್ನೊಂದು ಕಪ್ಪು ಬಣ್ಣದ್ದು ಅಲ್ಲಲ್ಲಿ, ಬಿಳಿ ಬಣ್ಣ. ಜವಾರಿ ಜಾತಿಯವು. ಹೆಸರಿಗೆ ತಕ್ಕಂತೆ ತುಂಬಾ ಸಾದುಪ್ರಾಣಿ. ಯಾರೊಬ್ಬರಿಗೂ ಇರಿಯುವುದು ಹೋಗಲಿ ಗೋಣು ಕೂಡ ಹಾಕುತ್ತಿರಲಿಲ್ಲ. ಹೀಗಾಗಿ ಮನೆಯೊಳಗೆ ದಾಟಿ ಹೋಗುವವರೆಲ್ಲ, ಪ್ರೀತಿಯಿಂದ ಆಕಳುಗಳನ್ನು ಸ್ವಲ್ಪ ತುರುಸಿಯೇ ಒಳಗೆ ಹೋಗುತ್ತಿದ್ದರು. ನಾನೂ ಕೂಡ ಮನೆಯಲ್ಲಿ ತಿನ್ನುವ ತಿನಿಸುಗಳು ಉಳಿದಾಗ, ಕಲಗಚ್ಚನ್ನು ಇಡುತ್ತಿದ್ದೆ. ಮನೆಯಲ್ಲಿ ಅಪ್ಪನ ಶ್ರಾದ್ಧವಿದ್ದಾಗ ಬ್ರಾಹ್ಮಣರು ಸಿಗದೇ ಹೋದಾಗ, ಬ್ರಾಹ್ಮಣರ ಊಟವನ್ನು ಆಕಳ ಮುಂದೆ ಇಡುತ್ತಿದ್ದೆ. ಅವು ಸಂತೋಷದಿಂದ ತಿನ್ನುತ್ತಿರುವಂತೆ, ಅವುಗಳ ಮುಖವನ್ನು, ತಿನ್ನುವ ರೀತಿಯನ್ನು ನೋಡುತ್ತ ನಿಲ್ಲುತ್ತಿದ್ದೆ. ಅವು ತಿಂದು ಸಂತೃಪ್ತಿಯಿಂದ ಮುಖ ಮೇಲಕ್ಕೆತ್ತಿ ನೋಡಿದಾಗ ಜೀವನ ಸಾರ್ಥಕವಾದಂತಹ ಭಾವದಿಂದ ಪುಲಕಿತಗೊಳ್ಳುತ್ತಿದ್ದೆ. ಹಿತ್ತ¯ಲ್ಲಿ ಅರಿವೆ ಒಗೆಯಲೊಂದು ಕಲ್ಲು, ದೋಣಿ. ದೊಡ್ಡದಾದ ಹುಣಸೆ ಮರವೊಂದಿತ್ತು. ಆ ಗಿಡದಲ್ಲಿ ದೆವ್ವವಿದೆಯಂದು ಹೇಳಿ ಮಕ್ಕಳು ಹುಣಸೆಕಾಯಿ ಕದಿಯದಂತೆ ಅಂಜಿಕೆ ಹಾಕಿದ್ದರು. ಆದರೂ ನಾನೊಮ್ಮೆ ಹುಣಸೆ ಕದಿಯಲು ಗಿಡವನ್ನೇರಿದ್ದೆ. ಯಾರೋ ಕೆನ್ನೆ ಸವರಿದಂತಾಗಿ ಗಾಬರಿಯಿಂದ ಜೋರಿನಿಂದ ಚೀರಿ ಕೈಬಿಟ್ಟು ನೆಲಕಂಡಿದ್ದೆ. ಅದನ್ನು ಕೇಳಿದ ಭಾಗಕ್ಕ ಓಡಿಬಂದು ಬಿದ್ದ ಗಾಯಕ್ಕೆ ಯಾವುದೋ ಗಿಡದ ತೊಪ್ಪಲನ್ನು ಅರಿದು ರಸ ಹಚ್ಚಿ ಕಟ್ಟಿದ್ದಳು. ಹುಣಸೆ ಗಿಡದ ಎಲೆಗಳು ಗಾಳಿಗೆ ನನ್ನ ಕೆನ್ನೆ ಸವರಿದ್ದವೆಂದು ಆಮೇಲೆ ಗೊತ್ತಾಗಿತ್ತು.
ಭಾಗಮ್ಮ ಮನೆಯನ್ನೆಲ್ಲ ಸ್ವಚ್ಛವಾಗಿಸುವಲ್ಲಿ ಮಗ್ನವಾಗಿದ್ದಳು. ಅಡುಗೆಮನೆ, ನಡುಮನೆ, ಮುಂದಿನಮನೆ, ಹಿತ್ತಲಮನೆ ಹೀಗೆ ಮನೆಯಲ್ಲ ಹರಿವಿದ್ದ ಸಾಮಾನುಗಳನ್ನೆಲ್ಲ ಓರಣವಾಗಿ ಇಡುವಲ್ಲಿಯೇ ಅವಳ ಪೂರ್ಣ ಮನಸ್ಸು ಕೇಂದ್ರಿಕೃತವಾಗಿತ್ತು. ಮನೆಯನ್ನೆಲ್ಲ ಶಗಣಿಯನ್ನು ತೆಗೆದುಕೊಂಡು ಸಾರಿಸಿ, ಮನೆ ತುಂಬ ಕಲಾತ್ಮಕತೆಯಿಂದ ಕೂಡಿದ ರಂಗವಲ್ಲಿಯನ್ನು ಬಿಡಿಸಿ ದೂರ ನಿಂತು ನೋಡಿ ಸಂತಸಪಟ್ಟಳು. ದೊಡ್ಡ-ದೊಡ್ಡ ಸಾಮಾನುಗಳನ್ನು, ಕಟ್ಟಿಗೆ ತೊಲೆಗಳನ್ನು ತೆಗೆದು ಅಟ್ಟದ ಮೇಲಿರಿಸಿದಳು. ಮೇಲಿದ್ದ ದೊಡ್ಡ-ದೊಡ್ಡ ಗಾತ್ರದ ತಾಮ್ರದ ಹಂಡೆ, ಕೊಳಗಗಳನ್ನು ಕೆಳಗಿಳಿಸಿ, ಅವುಗಳನ್ನೆಲ್ಲ ಹುಣಸೆಹಣ್ಣಿನಿಂದ ತಿಕ್ಕಿ ತಿಕ್ಕಿ ಲಕಲಕ ಹೊಳೆಯುವಂತೆ, ಕಣ್ಣು ಕುಕ್ಕುವಂತೆ ಮಾಡಿಟ್ಟಳು. ಇದಕ್ಕೆ ರೈತ ಮಲಪ್ಪ ಹಾಗೂ ಮುಸುರೆ ತಿಕ್ಕುವ ಲಕ್ಷಿ ತಕ್ಕ ಮಟ್ಟಿಗೆ ಸಹಾಯ ಮಾಡಿದ್ದರು. ಹೆಚ್ಚಿನ ಕೆಲಸವನ್ನು ಏಳು ದಶಕಗಳನ್ನು ಕಂಡ ಭಾಗಮ್ಮನೇ ಮಾಡಿದ್ದರೂ ಕೂಡ ಆಯಾಸದ ಕಳೆ ಅವಳ ಮುಖದಲ್ಲಿ ಹೆಚ್ಚಾಗಿ ಕಂಡುಬರುತ್ತಿರಲಿಲ್ಲ. ಈ ಮುಪ್ಪಿನ ಕಾಲದಲ್ಲಿ ಏಳು ದಿನಗಳ ಕಾಲ ನಡೆಯಲಿದ್ದ ಭಾಗವತ ಪಠಣದ ಸಂಭ್ರಮ ನೆನಿಸಿಕೊಂಡಾಗ ಅವಳ ಆಯಾಸವೆಲ್ಲ ಮಾಯವಾಗಿಬಿಡುತ್ತಿತ್ತು. ಮನೆಯಲ್ಲಿ ಭಾಗವತ ಪುರಾಣ ಸಪ್ತಾಹ ನಡೆಯುತ್ತಿರುವುದೇ ಒಂದು ಸೌಭಾಗ್ಯ, ಅದು ಕೇಳುವ ಅವಕಾಶ ತನಗೆ ಲಭ್ಯವಾದದ್ದು ಏಳೇಳು ಜನ್ಮದ ಪುಣ್ಯವೆಂದು ತಿಳಿದುಕೊಂಡಿದ್ದಳು. ದುಡಿದು ದೇಹ ದಣಿದಾಗ, ಮನಸ್ಸಿಗೆ ನೋವುಂಟಾದಾಗ ಭಾಗಮ್ಮ ದಣಿವಾರಿಸಿಕೊಳ್ಳಲು, ಮನಸ್ಸಿಗಾದ ನೋವನ್ನು ಮರೆಯಲು ಊರಿನಿಂದ ಅರ್ಧ ಕಿ.ಮಿ. ದೂರದಲ್ಲಿದ್ದ ಜುಟ್ಟಲಹಣುಮಂತ ದೇವರ ಗುಡಿಯಲ್ಲಿ ಮನದಣಿ ಕುಳಿತು ಬರುತ್ತಿದ್ದಳು.
ಇಷ್ಟು ದಿನ ಬರಿ ಮಕ್ಕಳನ್ನು ಬೆಳೆಸುವುದು, ಶಿಕ್ಷಣ ಕೊಡಿಸುವುದು, ಮದುವೆ, ಸೊಸೆಯಂದಿರು, ಮೊಮ್ಮಕ್ಕಳು ಹೀಗೆ ಸಂಸಾರದ ಜವಾಬ್ದಾರಿಗಳನ್ನು ನಿಭಾಯಿಸುವದೇ ದೇವರೆಂದು ತಿಳಿದಿದ್ದಳು. ಅದರಲ್ಲಿಯೇ ಸುಖವನ್ನು ಕಂಡಿದ್ದಳು. ಆ ಜವಾಬ್ದಾರಿಗಳನ್ನೆಲ್ಲ ಅಚ್ಚುಕಟ್ಟಾಗಿ ಪೂರೈಸಿ ಹೊರಬಂದಿದ್ದಳು. ಈಗ ಪಾರಮಾರ್ಥಿಕದತ್ತ ಒಲವು ಮೂಡತೊಡಗಿತ್ತು. ಇದರಿಂದ ಪಾದಯಾತ್ರೆಯಲ್ಲಿ ಮಂತ್ರಾಲಯದವರೆಗೆ, ಈ ಕಡೆಗೆ ಸೊಂದಾವರೆಗೆ ಹೀಗೆ ಹತ್ತು ವರ್ಷಗಳಿಂದಲೇ ಸಂಪೂರ್ಣವಾಗಿ ಕಾಲ್ನಡಿಗೆಯಲ್ಲಿಯೇ
-2-
ಹೋಗಿಬರುತ್ತಿದ್ದಳು. ತಕ್ಕ ಮಟ್ಟಿಗೆ ಓದಲು, ಬರೆಯಲು ಬಲ್ಲವಳಾದ್ದರಿಂದ ರಾಮಾಯಣ, ಮಹಾಭಾರತಗಳನ್ನು ವೈಚಾರಿಕ ದೃಷ್ಟಿಯಿಂದ ಹಲವು ಬಾರಿ ಓದಿದ್ದಳು. ಎಲ್ಲ ದೃಷ್ಟಿಯಿಂದ, ಎಲ್ಲ ದಿಕ್ಕುಗಳಿಂದಲೂ ಅವುಗಳನ್ನು ವಿವೇಚಿಸುವ, ವಿಮರ್ಶಿಸುವ ಪ್ರಯತ್ನ ಮಾಡಿದ್ದಳು. ಮಹಾಭಾರತ, ರಾಮಾಯಣಗಳು ಕಾಲ್ಪನಿಕವೇ ಇರಲಿ, ನೈಜ ಘಟನೆಗಳ ದಾಖಲೆಗಳೇ ಇರಲಿ ಒಟ್ಟಿನಲ್ಲಿ ಎರಡೂ ಅತ್ಯುತ್ತಮ ಗ್ರಂಥÀಗಳೆಂಬುದರಲ್ಲಿ ಸಂಶಯವಿಲ್ಲವೆಂದೆನಿಸಿತ್ತು ಅವಳಿಗೆ. ಅಲ್ಲದೇ ಈ ಎರಡೂ ಗ್ರಂಥಗಳನ್ನು ಬೇರೆ ಬೇರೆ ಹೆಸರಿನಲ್ಲಿ ಒಬ್ಭನೇ ಏಕೆ ಬರೆದಿರಬಾರದೆಂಬ ವಿಚಾರ ಬಹಳಷ್ಟು ಸಲ ಅವಳ ಮನಸ್ಸಿನಲ್ಲಿ ಬಂದು ಹೋಗಿತ್ತು. ಕೈಗಳು ಮುಸುರೆ ತಿಕ್ಕುವದು, ಪಾತ್ರೆ ತೊಳೆಯುವುದು, ನೆಲ ಸಾರಿಸುವದು, ಅರಿವೆಗಳನ್ನು ಹೊಲೆಯುವದು ಹೀಗೆ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದರೂ ಕೂಡ ಮನಸ್ಸು ಮಾತ್ರ ಆಧ್ಯಾತ್ಮಿಕ ವಿಷಯಗಳತ್ತ ಯೋಚನೆ ಮಾಡುತ್ತಲೇ ಇರುತ್ತಿತ್ತು. ದೇವರೆಂದರೇನು, ಆತ್ಮವೆಂದರೇನು, ದೇವರ ಅಸ್ತಿತ್ವ, ರೂಪಗಳ ಬಗೆಗೆ ಅಲ್ಲದೇ ಮಡಿ ಮೈಲಿಗೆಗಳ ಬಗೆಗೆ, ನಮಗೆ ಮಡಿಯನ್ನುವುದು ಎಷ್ಟರ ಮಟ್ಟಿಗೆ ಬೇಕು, ಏಕೆ ಬೇಕು ಮುಂತಾದವುಗಳ ಬಗೆಗೆ ವಿಚಾರ ಮಾಡುತ್ತಲಿತ್ತು.
ಭಾಗಮ್ಮ ಮಡಿಮೈಲಿಗೆಗಳ ಬಗ್ಗೆ ಹೆಚ್ಚಿನ ಮಹತ್ವ ಕೊಟ್ಟವಳಲ್ಲ. ಮೊದಲಿನಿಂದಲೂ ಏಕಾಗ್ರತೆಯನ್ನೇ ದೇವರೆಂದು ನಂಬಿದವಳು. ಮನಸ್ಸನ್ನು ಏಕಚಿತ್ತಗೊಳಿಸಲೊಂದು ಸಾಧನ ದೇವರೆಂದು ನಂಬಿದವಳು. ದೇವರೆಂದಿಗೂ ಮಡಿ ಮೈಲಿಗೆ ಬಯಸುವವನಲ್ಲ. ಮನಸ್ಸನ್ನು ಏಕಾಗ್ರತೆಗೊಳಿಸಿಕೊಳ್ಳಲಾಗದ ಜನರು ಮಡಿ ಮೈಲಿಗೆಯನ್ನು ಮಾಧ್ಯಮ ಮಾಡಿಕೊಂಡಿರುವ ಜನರ ಗುಂಪು ಒಂದೆಡೆಯಾದರೆ, ಕೇವಲ ನೆರೆದ ಜನಕ್ಕೆ ತಾವು ಮಾಡುತ್ತಿರುವ ಆಡಂಬರವನ್ನು ತೋರಿಸಲು ಮಾತ್ರ ಬಳಿಸಿಕೊಳ್ಳುವ ಗುಂಪು ಇನ್ನೊಂದು. ಮಡಿಮೈಲಿಗೆಗೆ ತೋರಿಸುವ ನಿಷ್ಠೆ, ಮಹತ್ವಗಳನ್ನು ಪ್ರಾಮಾಣಿಕವಾಗಿ ಈ ಜನ ದೇವರಲ್ಲಿ ತೋರಿದ್ದರೆ ಖಂಡಿತವಾಗಿಯೂ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬಹುದೆಂಬುದು ಅವಳ ನಂಬಿಕೆ. ದೇವರತ್ತ ಲಕ್ಷವೀಯದೇ ಕೇವಲ ಮಡಿಯನ್ನೇ ಆಡಂಬರಿಸುವ, ಪೂಜೆ ಮಾಡುವಾಗ ಯಾರಾದರೂ ಮುಟ್ಟಿ ಮೈಲಿಗೆ ಮಾಡಿಯಾರೆಂಬ ಅಳುಕಿನಲ್ಲಿ ಪೂಜೆ ಮಾಡುವವರನ್ನು ಕಂಡು ಅಲ್ಲದೇ ನಾವು ಮಡಿ ಮಾಡುವವರು ಶ್ರೇಷ್ಠರು, ಉಳಿದವರೆಲ್ಲ ಅಲ್ಪರೆಂಬ ಅಹಂದಿಂದ ವರ್ತಿಸುವವರನ್ನು ಕಂಡು ಅಸಹ್ಯ ಪಡುತ್ತಿದ್ದಳು. ಯಾವ ಕಲ್ಪನೆಯೂ ಇಲ್ಲದೆ ದೇವರನ್ನೇ ದತ್ತು ತೆಗೆದುಕೊಂಡವರಂತೆ ನಡೆಯುವವರನ್ನು ಕಂಡು ಮನದಲ್ಲಿಯೇ ಮರಗುತ್ತಿದ್ದಳು. ಮಡಿಯಂದರೇನು ತಿಳಿಯದ ಬೇಡರ ಕಣ್ಣಪ್ಪನಿಗೆ ಶಿವನೇಕೆ ಒಲಿದ, ಎಂದೋ ಸ್ನಾನ ಕಂಡ ದೇಹ, ಮಡಿಬಟ್ಟೆ ಧರಿಸದೆ ಮಾರೂದ್ದ ಜಡೆ, ಗೇಣುದ್ದ ಗಡ್ಡ ಬಿಟ್ಟು ಯಾರತ್ತೂ ಲಕ್ಷ ಕೊಡದೆ ದೇವರ ಧ್ಯಾನ ಮಾಡುತ್ತ ಕುಳಿತ, ಕೇವಲ ದೇವರನ್ನು ಒಲಿಸಿಕೊಳ್ಳಬೇಕೆಂದು ಹಿಮಾಲಯದಲ್ಲಿ ಹಠದಿಂದ ಧ್ಯಾನಸ್ಥರಾಗಿ ಕುಳಿತ ಸಾದು ಸಂತರೇನು ಹುಚ್ಚರೆ?
ಕೆಲ ವರ್ಷಗಳ ಹಿಂದೆ, ಊರಿನವರೆಲ್ಲ ಸೇರಿ ಹಣ ಕೂಡಿಸಿ ಪ್ರವಚನ ಹೇಳಲೊಬ್ಬರನ್ನು ಕರೆದುಕೊಂಡು ಬಂದಿದ್ದರು. ಮಜ್ಜಿಗೆ ಕುಡಿಯಲು ಮೀಸೆ ಹಿಡಿಯುವವನೊಬ್ಬ ಎನ್ನುವಂತೆ, ಪ್ರವಚನ ಹೇಳುವವನೊಬ್ಬನಾದರೆ ಅವನ ಸಹಾಯಕರು ಒಂಬತ್ತು ಮಂದಿ. ಅವರದೇ ಒಂದು ಗಾಡಿ ಇತ್ತು. ಅವರ ಆಪೇಕ್ಷೆಯಂತೆ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಒಂದು ಮಾತ್ರ ಲೋಪವಾಗಿತ್ತು. ಪ್ರವಚನಕಾರರ ಸ್ನಾನದ ವ್ಯವಸ್ಥೆ. ಅವರಿಗೆ ಸ್ನಾನ ಮಾಡಲು ಬೋರವೆಲ್ ಇದೆಯೆಂದರೆ ನಡೆಯುವುದಿಲ್ಲ, ಬಾವಿಯಿದೆಯೆಂದರೆ ಅದೂ ಸ್ನಾನಕ್ಕೆ ನಡೆಯುವುದಿಲ್ಲ. ಬಾವಿಯಿಂದ ಸೇದಿದ ನೀರು ವಜ್ರ್ಯ. ಹರಿಯುವ ನೀರು ಅಂದರೆ ಭೂಮಿಯ ಮೇಲಿನ ನೀರನ್ನೆ ನೇರವಾಗಿ ತೆಗೆದುಕೊಂಡು ಸ್ನಾನ ಮಾಡುವವರಂತೆ. ಬಾವಿಯಲ್ಲಿಳಿಯಬೇಕೆಂದರೆ ಕೆಳಗಿಳಿಯಲು ಮೆಟ್ಟಿಲುಗಳಾಗಲಿ, ನಾಲಿಗೆ ಕಲ್ಲುಗಳಾಗಲಿ ಇರಲಿಲ್ಲ. ಕೊನೆಗೆ ಊರಿನ ಜನರೆಲ್ಲ ಸೇರಿ ಒಂದು ನಿರ್ಣಯಕ್ಕೆ ಬಂದಿದ್ದರು. ಪ್ರವಚನಕಾರರನ್ನು ಹಗ್ಗಕ್ಕೆ ಕಟ್ಟಿ ಬಾವಿಯಲ್ಲಿ ಇಳಿಸುವದು, ಸ್ನಾನವಾದ ನಂತರ ಮೇಲಕ್ಕೆತ್ತುವದು. ಇದನ್ನೆಲ್ಲ ಗಮನಿಸಿದ ಭಾಗಮ್ಮನಿಗೆ ಸಿಟ್ಟು ಬಂದಿತ್ತು. “ಶ್ರೀ ರಾಮಚಂದ್ರ ಶಬರಿಯ ಭಕ್ತಿಗೆ ಮೆಚ್ಚಿ ಎಂಜಲದ ಹಣ್ಣುಗಳನ್ನೇ ತಿಂದ; ಇದು ಪುರಾಣ. ಈ ಪ್ರವಚನಕಾರ ನಮ್ಮ ಮನಸ್ಸನ್ನು ತಿಳಿದುಕೊಳ್ಳಲಾರದ ಕನಿಷ್ಟ ವಿಚಾರದವನಾಗಿದ್ದಾನೆ. ಈ ಊರಿನ ಜನರ ಭಾವನೆಗಳಿಗಿಂತ ಇವನ ಸ್ನಾನವೇ ಹೆಚ್ಚಾಗಿದೆ. ಇಂಥ ಪ್ರವಚನಕಾರರಿಂದ ನಾವೇನು ಕಲಿಯಬೇಕಾಗಿದೆ? ನಡಕ್ಕೆ
-3-
ಕೂಡಬೇಕಾದ ಹಗ್ಗ ಕುತ್ತಿಗೆಗೆ ಕುಳಿತು ಅನಾಹುತವಾದೀತು! ತಂದ ಜಾಗದಲ್ಲಿಯೇ ಇವರನ್ನು ಬಿಟ್ಟು ಬನ್ನಿ!” ಎಂದು ವಿವಾದಕ್ಕೆ ತೆರೆ ಎಳೆದಿದ್ದಳು ಭಾಗಮ್ಮ.
ಭಾಗಮ್ಮನ ಮದುವೆಯಾದಾಗ ಅವಳಿಗೆ ಕೇವಲ ಹನ್ನೆರಡು ವರ್ಷಗಳು ಮಾತ್ರ. ಆವಾಗ್ಯೆ ಐದು ದಿನಗಳ ಕಾಲ ಮದುವೆಗಳಾಗುತ್ತಿದ್ದವು. ಅಕ್ಷತೆ ಬೀಳುವವರೆಗೆ ಹುಡುಗ ಹುಡುಗಿ ಒಬ್ಬರನ್ನೊಬ್ಬರು ನೋಡುತ್ತಿರಲಿಲ್ಲ. ಸಂಭ್ರಮ, ಸಡಗರದಿಂದ ಮದುವೆ ಕಾರ್ಯಕ್ರಮ ನಡೆದಿದ್ದವು. ಹುಡುಗನಿಗೆ ಸೈಕಲ್ ಕೊಡಿಸುತ್ತೇವೆಂದು ಕೊಡಿಸದೇ ಇದ್ದ ಕಾರಣ ಗಂಡುಬೀಗರ ಮುಖಗಳು ಗಂಟಿಕ್ಕಿಕೊಂಡಿದ್ದವು. ಎರಡೂ ಗುಂಪುಗಳ ನಡುವೆ ಇರಿಸು ಮುರಿಸು ಪ್ರಾರಂಭವಾಗಿಬಿಟ್ಟಿದ್ದವು. ಇದೇ ಮನದಲ್ಲಿ ಕುದಿದು ಸ್ಪೋಟಗೊಂಡು ಹೊರಬಿದ್ದಿತ್ತು. ಮದುವೆ ಹಿಂದಿನ ದಿನದ ರಾತ್ರಿ ರುಕ್ಕೋತದೂಟ ಕೂಡ ಮುಗಿದು, ಕೈತೊಳೆದುಕೊಳ್ಳುವ ಸಂದರ್ಭದಲ್ಲಿ ಬಿಸಿನೀರು ಸರಿಯಾಗಿ ಕಾಯ್ದಿಲ್ಲ, ಕೈಯ್ಯನ್ನೊರಿಸಿಕೊಳ್ಳಲು ಶುಭ್ರವಾದ ಟವೆಲ್ಲು ಇಟ್ಟಿಲ್ಲ, ಹೀಗೆ ಏನೇನೊ ಕಾರಣಗಳನ್ನು ಹುಡುಕಿ ಜಗಳಕ್ಕೆ ಬೇಕಾದ ವಾತಾವರಣ ನಿರ್ಮಿಸಿ ಕೈ ಕೈ ಮಿಲಾಯಿಸುವ ಮಟ್ಟಿಗೆ ಹೋಗಿ, ಗಂಡಿನವರು ಹದಿನಾಲ್ಕು ವರ್ಷಗಳ ಮದುಮಗನನ್ನು ಹೆಗಲಮೇಲೆ ಕೂಡಿಸಿಕೊಂಡು ಪಲಾಯನ ಮಾಡಿಬಿಟ್ಟಿದ್ದರು. ಧೃತಿಗೆಡದ ಭಾಗಮ್ಮನ ತಂದೆ, ತನ್ನ ಅಕ್ಕನ ಮಗ ಹಣಮಯ್ಯನೊಂದಿಗೆ ಮದುವೆ ಮಾಡುವದಾಗಿ ನಿರ್ಧರಿಸಿ ಬಿಟ್ಟ ಅಷ್ಟೆ. ಮದುವೆಯಲ್ಲಿ ದುಡಿದು ದಣಿದು ಮಲಗಿದ್ದ ಹುಡುಗ ಹಣಮಯ್ಯನನ್ನು ಎಬ್ಬಿಸಿ ಸುರಿಗೆ ನೀರು ಹಾಕಿ, ಮಂಡೊಳಿ ಕಟ್ಟಿ, ಅದೇ ಮುಹೂರ್ತಕ್ಕೆ ಅಕ್ಷತಾರೋಪಣÀ ಮಾಡಿದ್ದರು. ಹೀಗೆ ಹಣಮಯ್ಯ ಭಾಗಮ್ಮನ ಬಾಳಸಂಗಾತಿಯಾಗಿದ್ದ.
ಹಣಮಯ್ಯನಿಗೆ ಬರಿ ನಾಟಕದ ಗೀಳು. ಅವನ ಬಾಯಲ್ಲಿ ಬರಿ ನಾಟಕದ ಪದಗಳು, ನಾಟಕದ ಸಂಭಾಷಣೆಗಳಿರುತ್ತಿದ್ದವು. ಅಲ್ಲದೇ, ಯಾವಾಗಲೂ ಬಾಯಿತುಂಬ ಎಲೆಯಡಿಕೆ ತುಂಬಿಕೊಂಡಿರುತ್ತಿದ್ದ. ಸಂಸಾರದತ್ತ ಒಲವಿರಲಿಲ್ಲ. ಹೆಂಡತಿಯಂದರೆ ಕೇವಲ ಕಾಮ ತೀಟೆಯನ್ನು ತೀರಿಸಿಕೊಳ್ಳುವ ವಸ್ತುವೆಂದು, ಹಸಿದು ಮನೆಗೆ ಬಂದಾಗ ಅಡುಗೆ ಮಾಡಿ ಊಟವಿಕ್ಕುವ ಆಳೆಂದು ತಿಳಿದುಕೊಂಡಿದ್ದ. ನಾಟಕದ ಹೆಣ್ಣೊಂದರ ಬೆನ್ನು ಬಿದ್ದು, ಭಾಗಮ್ಮನೊಂದಿಗೆ ಬಡಿದಾಡಿ-ಹೊಡದಾಡಿ ಬಂಗಾರದ ಸಾಮಾನುಗಳನ್ನೆಲ್ಲ ಅವಳ ಮನೆಗೆ ತುಂಬಿದ್ದ. ಜೊತೆಗೆ ಕುಡಿತವೂ ಪ್ರಾರಂಭವಾಗಿ ಸಾಯಬಾರದ ವಯಸ್ಸಿನಲ್ಲಿ ತೀರಿಕೊಂಡು, ಭಾಗಮ್ಮನಿಗೆ ವಿಧವೆ ಪಟ್ಟದೊಂದಿಗೆ ಮೂರು ಗಂಡು, ಎರಡು ಹೆಣ್ಣು ಮಕ್ಕಳ ಜವಾಬ್ದಾರಿಯನ್ನೂ ಬಿಟ್ಟು ಹೋಗಿದ್ದ. ಮುಂದೆ ಭಾಗಮ್ಮ ತುಂಬ ವಿವೇಕದಿಂದ ಜೀವನ ನಡಿಸಿ, ಹಣಮಯ್ಯ ಹಾಳು ಮಾಡಿ ಉಳಿದಿದ್ದ ನಾಲ್ಕು ಎಕರೆ ಜಮೀನಿನಲ್ಲಿ ಗಂಡಸಿನಂತೆ ದುಡಿದು, ಎಲ್ಲ ಆಗು-ಹೋಗುಗಳನ್ನು ನಿಭಾಯಿಸಿಕೊಂಡು ಮಕ್ಕಳಿಗೆಲ್ಲ ವಿದ್ಯೆ ಕೊಡಿಸಿದ್ದಳು. ವಿದ್ಯೆಗೆ ತಕ್ಕಂತೆ ನೌಕರಿಗಳೂ ಸಿಕ್ಕಿದ್ದವು. ಮುಂದೆ ಮದುವೆಯೂ ಆಗಿತ್ತು. ಈಗ, ಮಕ್ಕಳು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹೀಗೆ ಸಂಸಾರದ ಬಳ್ಳಿ ಹಬ್ಬಿದ್ದರೂ ಕೂಡ ಊರಲ್ಲಿ ಇರುತ್ತಿದ್ದುದು ಮಾತ್ರ ಭಾಗಮ್ಮ ಒಬ್ಬಳೆ. ಅವರೆಲ್ಲ ಬೆಂಗಳೂರು, ಮಂಗಳೂರು, ದಾವಣಗೆರೆ, ಮುಂತಾದ ಕಡೆಗಿದ್ದರು. ಭಾಗವತ ಪುರಾಣಕ್ಕೆ ಎಲ್ಲರೂ ಸೇರುವವರಿದ್ದರು. ಎಲ್ಲರೊಂದಿಗೆ ಭಾಗವತ ಪುರಾಣ ಕೇಳುವ ಸಂಭ್ರಮವೇ ಅವಳನ್ನು ಲವಲವಿಕೆಯಿಂದಿರುವಂತೆ ಮಾಡಿತ್ತು. ಊರಲ್ಲಿ ಅವಳೊಬ್ಬಳೇ ಇರುತ್ತಿದ್ದುದರಿಂದ ಭಾಗವತ ಪುರಾಣಕ್ಕಾಗಿ ಬೇಕಾಗುತ್ತಿದ್ದ ಪೂರ್ವತಯಾರಿ ಭಾಗಮ್ಮಳೊಬ್ಬಳಿಗೆಯೇ ಬಿದ್ದಿದ್ದರೂ ಕೂಡ, ಅಚ್ಚುಕಟ್ಟಾಗಿ ಎಲ್ಲ ತಯಾರಿ ಮಾಡಿಟ್ಟಿದ್ದಳು.
ಕಾರ್ಯಕ್ರಮದ ಹಿಂದಿನ ದಿನ ದೂರದೂರಿಂದ ಭಾಗಮ್ಮನ ಎಲ್ಲ ಬಳಗವೂ ಸೇರಿತ್ತು. ಮಕ್ಕಳು, ಸೊಸೆ ನಗುತ್ತ ಕೆಲಸದಲ್ಲಿ ತೊಡಗಿದ್ದರು. ಮೊಮ್ಮಕ್ಕಳು ಶಹರದಿಂದ ಹಳ್ಳಿಗೆ ಬಂದಿದ್ದರಿಂದ ಇಲ್ಲಿಯ ದನಗಳನ್ನು, ಕುರಿ-ಕೋಳಿಗಳನ್ನು ನೋಡಿ ಸಂತಸದಿಂದ ಕುಣಿದಾಡುತ್ತಿದ್ದವು; ಮನೆತುಂಬ ಜಿಗಿದಾಡುತ್ತಿದ್ದವು. ಇದನ್ನೆಲ್ಲ ನೋಡುತ್ತ ಕುಳಿತಿದ್ದ ಭಾಗಮ್ಮನ ಸಂತೋಷಕ್ಕೆ ಪಾರವೇ ಇರಲಿಲ್ಲ. ಎಲ್ಲರಿಗೂ ಮೊದಲೇ ತನ್ನ ಕೈಯ್ಯಾರೆ ಮಾಡಿಟ್ಟಿದ್ದ ಉಂಡಿ, ಅವಲಕ್ಕಿಗಳನ್ನು ತಿನ್ನಲು ಕೊಟ್ಟಳು. ಮೊಮ್ಮಕ್ಕಳನ್ನು ತೊಡೆಯ ಮೇಲೆ ಕೂಡ್ರಿಸಿಕೊಂಡು ತಿನ್ನಿಸಿದಳು.
ಭಾಗವತ ಪುರಾಣ ಹೇಳುವ ಪಂಡಿತರು ರಾಯಚೂರು ಜಿಲ್ಲೆ ಯಾವದೋ ಊರಿನಿಂದ ಬಂದಿದ್ದರು. ಅವರಿಗೆ ಇಳಿದುಕೊಳ್ಳಲು ಬೇರೆಯೇ ಒಂದು ಕೋಣೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅವರಿಗೆ ಬೇಕಾಗುವ ಇದ್ದಿಲುವಲೆ, ಇದ್ದಲು, ಮಡಿಪಂಚೆ, ಮಡಿನೀರು ಎಲ್ಲವೂ ಆ ಕೋಣೆಯಲ್ಲಿಯೇ ಇಟ್ಟುಕೊಟ್ಟಿದ್ದರು. ತಮ್ಮ
-4-
ಮಡಿ ಅಡುಗೆಯನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಅವರ ಉಸ್ತುವಾರಿ ನೋಡಿಕೊಳ್ಳಲು, ಮಕ್ಕಳು ಅವರ ಹತ್ತಿರ ಸುಳಿಯದಂತೆ ಎಚ್ಚರಿಕೆ ವಹಿಸಲು ಭಾಗಮ್ಮನ ಹಿರಿಯ ಮಗನೇ ನಿಂತ.
ಮರುದಿನ ಮುಂಜಾನೆ ಪಂಡಿತರು ಭಾಗವತ ಪುರಾಣವನ್ನೋದಲು ಸ್ನಾನ ಸಂಧ್ಯಾದಿಗಳನ್ನೆಲ್ಲ ಮುಗಿಸಿ, ಮಣೆಯಮೇಲೆ ಕುಳಿತುಕೊಂಡು ಪುರಾಣಕ್ಕೆ ಮೊದಲು- “ಸಕೇಶಿಗಳು ಯಾರಾದರೂ ಇದ್ದಲ್ಲಿ ಇಲ್ಲಿ ಕುಳಿತುಕೊಳ್ಳುವ ಹಾಗಿಲ್ಲ. ಭಾಗವತ ಪುರಾಣ ಕೇಳುವ ಅಧಿಕಾರ ಅವರಿಗಿಲ್ಲ” ಎಂಬ ಸೂಚನೆಯೊಂದನ್ನು ಇಟ್ಟರು. ಸ್ನಾನ ಮುಗಿಸಿಕೊಂಡು ಭಾಗವತ ಕೇಳಿ ಜನ್ಮ ಸಾರ್ಥಕ ಮಾಡಿಕೊಳ್ಳಬೇಕೆಂದು ಅವಸರದಿಂದ ಬರುತ್ತಿದ್ದ ಭಾಗಮ್ಮನನ್ನು ತಡೆದು ಪಂಡಿತರು ಹೇಳಿದ ಮಾತನ್ನು ಸೊಸೆ ಅವರ ಕಿವಿಯಲ್ಲಿ ಹೇಳಿದಾಗ ಅವರಿಗೆ ಬರಸಿಡಿಲು ಬಡೆದಂತಾಗಿತ್ತು. ಪಂಡಿತರ ಅಜ್ಞಾನಕ್ಕೆ ಭಾಗಮ್ಮ ಮನದಲ್ಲಿಯೇ ಮರುಗಿದಳು. ವಿಶ್ವಮಾನವರಾಗುತ್ತಿರುವ ಇಂದಿನ ದಿನಗಳಲ್ಲಿ, ತಾಂತ್ರಿಕವಾಗಿ ಇಷ್ಟೊಂದು ಮುಂದುವರೆಯುತ್ತಿರುವ ಇಂದಿನ ದಿನಗಳಲ್ಲಿ ನಮ್ಮ ಸಮಾಜ ಮುಂದುವರೆಯುವದೆಂತು ಎಂದು ಮನದಲ್ಲಿಯೇ ಹಳಹಳಿಸಿದಳು. ‘ನಾನು ಭಾಗವತ ಪುರಾಣ ಕೇಳದಂತಹ ಮಾಡಿರುವ ಪಾಪವಾದರೂ ಏನು?’ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡಳು. ಎಲ್ಲರ ದೇಹದಲ್ಲಿಯೂ ಪ್ರಾಣದೇವರು ವಾಸಿಸುತ್ತಿರುತ್ತಾನೆ. ಅದರಂತೆಯೇ ನನ್ನ ದೇಹದಲ್ಲಿಯೂ ಕೂಡ. ಈ ಪಂಡಿತರು ಮಾಡುತ್ತಿರುವ ಅಪಚಾರ, ಅವÀಮಾನ ನನಗಲ್ಲ, ನನ್ನೊಳಗಿರುವ ಪ್ರಾಣದೇವರಿಗೆ. ಇವನ ಅವಿವೇಕಿತನವನ್ನು ದೇವರು ಕ್ಷಮಿಸಲಿ. ಅವನಿಗೆ ಒಳ್ಳೆಯ ಬುದ್ಧಿಯನ್ನು ಕೊಡಲಿ ಎಂದು ಮನದಲ್ಲಿಯೇ ಅಂದುಕೊಂಡಳು. ಇಂಥ ಸಮಾಜದಿಂದ ದೂರ ದೂರ ಹೋದಷ್ಟು ಮನಸ್ಸಿಗೆ ನೆಮ್ಮದಿಯನ್ನಿಸತೊಡಗಿತು. ಏಕಾಂತ ಧ್ಯಾನಕ್ಕೆ ಊರ ಹೊರಗಿನ ಗುಡಿಯೇ ಸರಿಯಾದ ಜಾಗವೆನ್ನಿಸಿತು. ನನ್ನೊಬ್ಬಳಿಂದ ಉಳಿದವರಿಗೆಲ್ಲ ತೊಂದರೆಯಾಗುವುದು ಬೇಡವೆಂದು ಊರ ಹೊರಗಿನ ಜುಟ್ಟದ ಹಣಮಂತದೇವರ ಗುಡಿಯತ್ತ ದುಃಖ ನಿರಾಸೆಗಳಿಂದ ಭಾರವಾದ ಹೆಜ್ಜೆ ಹಾಕಿದಳು ಭಾಗಮ್ಮ.
Labels: ಹಾಸ್ಯ


0 Comments:
Post a Comment
Subscribe to Post Comments [Atom]
<< Home